ವೇದಗಳನ್ನು ಗಂಡಸರೇ ಯಾಕೆ ಓದಬೇಕು..?

ವೇದಗಳನ್ನು ಗಂಡಸರೇ ಯಾಕೆ ಓದಬೇಕು. ಹೆಂಗಸರು ಯಾಕೆ ವೇದ ಉಪನ್ಯಾಸವನ್ನು ಮಾಡಬಾರದು ಹೀಗೆ ಈಗೀಗ ಕಾಡುತ್ತಿರುವ ಪ್ರಶ್ನೆಗಳು. ಇದರ ಹಿನ್ನೆಲೆ ಏನು? ಶಾಸ್ತ್ರದಲ್ಲಿ ಹೇಳಿದ್ದರೆ ಇದರ ಅರ್ಥ ಏನು? ಎಷ್ಟರಮಟ್ಟಿಗೆ ಇದು ಔಚಿತ್ಯಪೂರ್ಣ? ಇದರ ಬಗ್ಗೆ ಸ್ವಲ್ಪ ತಿಳಿಯಬೇಕು. ಹೆಂಗಸರು ವೇದ ಓದುವ ಪರಂಪರೆ ಯಾಕೆ ತಪ್ಪಿಹೋಯಿತು. ಋಗ್ವೇದದಲ್ಲಿಯೇ ಋಷಿಕೆಯರು ಕಂಡ 30ಕ್ಕೂ ಹೆಚ್ಚು ಮಂತ್ರಗಳಿವೆ. ಆತ್ರೇಯೀ, ಅಪಾಲ ಆತ್ರೇಯೀ, ವಿಶ್ವಭಾರ, ಶಶಿ ಇಂಥಾ ಋಷಿಕೆಯರು ಕಂಡ ಮಂತ್ರಗಳು ಋಗ್ವೇದ ಸಂಹಿತೆಯಲ್ಲಿದೆ. ಇದರಲ್ಲಿ ಅನೇಕ ಮುಖಗಳಿವೆ. ಬಹಳ ಪ್ರಾಚೀನ ಕಾಲದಲ್ಲಿ ಏನಿತ್ತು . ಹೆಣ್ಣುಮಕ್ಕಳನ್ನು ಎರಡು ಭಾಗಮಾಡುತ್ತಿದ್ದರು ಬ್ರಹ್ಮವಾದಿನಿಯರು, ಸದ್ಯೋವಧುಗಳು ಎಂದು ಎರಡು ವಿಭಾಗ. ಬ್ರಹ್ಮವಾದಿನಿಯರು ಜೀವನದುದ್ದಕ್ಕೂ ಆಧ್ಯಾತ್ಮ ಚಿಂತನೆಗೇ ತೊಡಗಿಸಿಕೊಂಡವರು. ಸದ್ಯೋವಧುಗಳು ಸಾಮಾನ್ಯ ವಿದ್ಯಾಭ್ಯಾಸ ಮಾಡಿ ತಕ್ಷಣವೇ ಗೃಹಸ್ಥ ಜೀವನಕ್ಕೆ ಪ್ರವೇಶಿಸುವವರು. ಕಾರಣ ಬಾಲ್ಯ ವಿವಾಹ ಪದ್ಧತಿ . 8 ವರ್ಷಕ್ಕೆ ಗಂಡು ಮಕ್ಕಳನ್ನ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಅಲ್ಲಿ 12 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದರು. 20 ವಯಸ್ಸಿಗೆ ಮನೆಗೆ ಬಂದು 8 ವರ್ಷದ ಹುಡುಗಿಯನ್ನು ಮದುವೆಯಾಗಿ , ಸಂಸಾರ ಮಾಡಿಕೊಂಡು ಮನೆಯಲ್ಲೇ ಗುರುಕುಲವನ್ನು ತೆಗೆಯುತ್ತಿದ್ದರು. ಅದೇ ಗುರುಕುಲದಲ್ಲಿ ಗಂಡನ ಕೈಯಲ್ಲೇ ಹೆಂಡತಿಯಾದವಳು ವಿದ್ಯಾರ್ಥಿಯಾಗಿ , ಪ್ರಾಪ್ತ ವಯಸ್ಸಿಗೆ ಬರುವವರೆಗೂ ಶಿಕ್ಷಣ ಪಡೆದು ಆಮೇಲೆ ಗೃಹಣಿಯಾಗಿ ಸಂಸಾರ ಮಾಡುತ್ತಿದ್ದಳು. ಇದು ಒಂದು ತರಹ ಸುವ್ಯವಸ್ಥೆಗೆ ಕಾರಣವಾಯಿತು. ನಂತರದ ದಿನಗಳಲ್ಲಿ ಮದುವೆಯಾದ ಹೆಣ್ಣುಮಗುವನ್ನು ವೇದಾಧ್ಯಯನಕ್ಕೆ ಬಲವಂತ ಮಾಡಬಾರದು ಎಂಬ ಸಂಸ್ಕೃತಿಯು ಬಂತು. ಮನೆವಾರ್ತೆಯನ್ನು ನೋಡಿಕೊಂಡು ವೇದಾಧ್ಯನ ಕಷ್ಟ, ಮನೆಯನ್ನು ನೋಡಿಕೊಳ್ಳುವುದೂ ವೇದಾಧ್ಯನದಷ್ಟೇ ಪುಣ್ಯದ ಕೆಲಸ ಅಂದರು. ವೈಜ್ಞಾನಿಕವಾಗಿ ಹೇಳುವುದಾದರೆ ಉಚ್ಚ ಶಿಕ್ಷಣವನ್ನು ಅವರ ತಲೆಯಮೇಲೆ ಹೇರಿದರೆ ಅದರ ಬೌದ್ಧಿಕ ಒತ್ತಡದಿಂದ ಅವರ ಗರ್ಭಕೋಶ ದುರ್ಬಲವಾಗುತ್ತದೆ . ಇದರಿಂದ ದುರ್ಬಲವಾದ ಮಕ್ಕಳು ಹುಟ್ಟುತ್ತಾರೆ. ಐತರೇಯ ಉಪನಿಷತ್ತಿನಲ್ಲಿ ಒಂದು ಅಧ್ಯಾಯದಲ್ಲಿ ಅದು ಗರ್ಭದ ವಿವರಣೆ ಕೊಡುವ ಅಧ್ಯಾಯ. ಅದರಲ್ಲಿ ಅಪಕ್ರಾಮಂತು ಗರ್ಭಿಣ್ಯಹ ಅಂದರೆ ಈ ಉಪನಿಷತ್ತಿನ ಪ್ರವಚನ ಮಾಡುವಾಗ ಯಾರಾದರೂ ಗರ್ಭಿಣಿಯರು ಕೂತಿದ್ದರೇ ಅವರನ್ನು ಹೊರಟು ಹೋಗಲು ಹೇಳಿ ಅದೇ ಅಧ್ಯಾಯದ ಕೊನೆಯಲ್ಲಿ ಈ ಅಧ್ಯಾಯ ಮುಗಿಯಿತು ಬಂದು ಕುಳಿತುಕೊಳ್ಳಲು ಹೇಳಿ ಎನ್ನುತ್ತದೆ. ಇದರ ಅರ್ಥ ಹೆಣ್ಣುಮಕ್ಕಳು ಉಪನಿಷತ್ ಪಾಠವನ್ನು ಕೇಳುತ್ತಿದ್ದರು ಎಂದು ಅರ್ಥವಾಗುತ್ತದೆ. ಆದ್ದರಿಂದ ವೇದವನ್ನು ಕಲಿಯಲು ಇಬ್ಬರಿಗೂ ಸಮಾನ ಹಕ್ಕಿದೆ ಎನ್ನುವ ವಿಷಯ ಅರ್ಥವಾಗುತ್ತದೆ.
ಶ್ರೀಕೃಷ್ಣಾರ್ಪಣಮಸ್ತು
(ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರ)